1. ಮೆದು ಹಾಸಿನ ಕುರ್ಚಿ ಹಿತಕರವಾಗಿರಲು ಕಾರಣವೇನು?
ಡಾ|| ಎಂ.ಎಸ್.ಚಂದ್ರಶೇಖರ, ಭೌತವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ

ಕಬ್ಬಿಣದ ಕುರ್ಚಿಗೆ ಹೋಲಿಸಿದರೆ ಮೆದುಹಾಸಿನ ಕುರ್ಚಿ ಹೆಚ್ಚು ಹಿತಕರವಾಗಿ ಕಾಣುತ್ತದೆ. ಕಬ್ಬಿಣದ ಕುರ್ಚಿಯ ಮೇಲೆ ಕುಳಿತಾಗ ನಮ್ಮ ದೇಹದ ಸ್ವಲ್ಪ ಭಾಗ ಮಾತ್ರ ಕುರ್ಚಿಯ ಸಂಪರ್ಕಕ್ಕೆ ಬರುತ್ತದೆ. ನಮ್ಮ ದೇಹದ ತೂಕ ಕುರ್ಚಿಯ ಈ ಚಿಕ್ಕ ಪ್ರದೇಶದ ಮೇಲೆ ಮಾತ್ರ ಒತ್ತಡವನ್ನು ಬೀರುತ್ತದೆ. ನಮ್ಮ ದೇಹ ಕುರ್ಚಿಯ ಮೇಲೆ ಎಷ್ಟು ಒತ್ತಡವನ್ನು ಹಾಕುತ್ತದೆಯೋ ಅಷ್ಟೇ ಪ್ರಮಾಣದ ಒತ್ತಡ ಕುರ್ಚಿಯ ಸಂಪರ್ಕದಲ್ಲಿರುವ ನಮ್ಮ ದೇಹದ ಮೇಲೂ ಉಂಟಾಗುತ್ತದೆ. ಆದರೆ ಮೆದು ಹಾಸಿನ ಕುರ್ಚಿಯ ಮೇಲೆ ನಾವು ಕುಳಿತಾಗ ಅದು ನಮ್ಮ ದೇಹದ ಆಕಾರವನ್ನೆ ಪಡೆದುಕೊಳ್ಳುವ ಕಾರಣ ನಮ್ಮ ದೇಹದ ತೂಕ ಕುರ್ಚಿಯ ವಿಸ್ತಾರವಾದ ಪ್ರದೇಶದ ಮೇಲೆ ಬೀಳುತ್ತದೆ. ಅಂದರೆ ನಮ್ಮ ತೂಕ ಹೆಚ್ಚು ಪ್ರದೇಶದ ಮೇಲೆ ಹಂಚಿಕೆಯಾಗುತ್ತದೆ. ನಮ್ಮ ದೇಹದ ಮೇಲೆ ಬೀಳುವ ಒತ್ತಡ ಹಂಚಿಕೆಯಾಗಿ ನಮಗೆ ಹಿತಕರ ಅನುಭವ ಉಂಟಾಗುತ್ತದೆ.
dfd
ದೇವರು ಮೈ ಮೇಲೆ ಬರುತ್ತಾನೆ ಎಂದು ಹೇಳಿಕೊಳ್ಳುವ ಕೆಲವರು ಚೂಪಾದ ಮೊಳೆಗಳಿರುವ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ. ಇವರಿಗೆ ಮೊಳೆಗಳು ಏಕೆ ಚುಚ್ಚಿಕೊಳ್ಳುವುದಿಲ್ಲ ಎಂಬುದನ್ನು ಇದೇ ರೀತಿ ವಿವರಿಸಬಹುದು. ದೇಹದ ತೂಕ ಹಲವು ಮೊಳೆಗಳ ಮೇಲೆ ಹಂಚಿಕೆಯಾಗುತ್ತದೆ. ಮೊಳೆಗಳ ನಡುವಿನ ಅಂತರವನ್ನು ಕಡಿಮೆ ಮಾಡಿದಷ್ಟು ಈ ಪ್ರತಿ ಮೊಳೆಯ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ. ಇದೇ ರೀತಿ ಗೋಡೆಗೆ ಹೊಡೆಯುವ ಮೊಳೆ ಚೂಪಾಗಿದ್ದರೆ, ಗೋಡೆಯ ಪ್ರತಿ ಚದರ ವಿಸ್ತೀರ್ಣದ ಮೇಲೆ ಬೀಳುವ ಒತ್ತಡ ಹೆಚ್ಚಾಗಿರುತ್ತದೆ. ಆದ್ದರಿಂದ ಅದು ಸುಲಭವಾಗಿ ಒಳಗೆ ಹೋಗುತ್ತದೆ.