2. ಸೈಕಲ್ ಚಲಿಸುತ್ತಿರುವಾಗ ಚಕ್ರದ ಕೆಳಭಾಗದ ಕಡ್ಡಿಗಳಿಗಿಂತ ಮೇಲ್ಭಾಗದ ಕಡ್ಡಿಗಳು ಮಂಕಾಗಿ ಕಾಣಿಸುವುದೇಕೆ?
ಡಾ|| ಎಂ.ಎಸ್.ಚಂದ್ರಶೇಖರ, ಭೌತವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ

ಸುತ್ತುತ್ತಿರುವ ಸೈಕಲ್ ಚಕ್ರದ ಎಲ್ಲಾ ಭಾಗಗಳು ಒಂದೇ ವೇಗದಲ್ಲಿ ಮುಂದಕ್ಕೆ ಚಲಿಸದೇ ಇರುವುದೇ ಇದಕ್ಕೆ ಕಾರಣ. ನಂಬಲು ಅಸಾಧ್ಯವೆನಿಸಿದರೂ ಚಕ್ರದ ಮೇಲ್ಭಾಗವು ಕೆಳಭಾಗಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುತ್ತದೆ. ಚಲಿಸುತ್ತಿರುವ ಚಕ್ರದ ಪ್ರತಿಯೊಂದು ಭಾಗವೂ ತನ್ನ ಅಕ್ಷದ ಸುತ್ತಲೂ ಸುತ್ತುತ್ತಿರುತ್ತದೆ ಮತ್ತು ಚಕ್ರದ ಮೇಲ್ಭಾಗ ಮುಂದಕ್ಕೂ, ಕೆಳಭಾಗ ಹಿಂದಕ್ಕೂ ಚಲಿಸುತ್ತಿರುತ್ತದೆ. ಈ ಎರಡು ಚಲನೆಗಳೂ ಸೇರಿ ಚಕ್ರದ ಮೇಲ್ಭಾಗ ಮತ್ತು ಕೆಳಭಾಗಗಳ ವೇಗದಲ್ಲಿ ವ್ಯತ್ಯಾಸವಾಗುತ್ತದೆ. ಚಕ್ರದ ಮೇಲ್ಭಾಗದಲ್ಲಿ ಸುತ್ತುವಿಕೆ ಮತ್ತು ಚಕ್ರದ ಸ್ಥಾನ ಪಲ್ಲಟ ಒಂದೇ ದಿಕ್ಕಿ ನಲ್ಲಿ ಇರುವುದರಿಂದ ಎರಡನ್ನೂ ಕೂಡಬೇಕಾಗುತ್ತದೆ. ಕೆಳಭಾಗದಲ್ಲಾದರೆ ಚಕ್ರದ ಸುತ್ತುವಿಕೆ ಮತ್ತು ಸೈಕಲ್‍ನ ಚಲನೆ ವಿರುದ್ಧ ದಿಕ್ಕುಗಳಲ್ಲಿದ್ದು, ಒಂದರಿಂದ ಮತ್ತೊಂದನ್ನು ಕಳೆಯಬೇಕಾಗುತ್ತದೆ. ಅಂದರೆ ಚಕ್ರದ ಎಲ್ಲ ಭಾಗಗಳೂ ಒಂದೆ ವೇಗದಲ್ಲಿ ಚಲಿಸುವುದಿಲ್ಲ. ಚಕ್ರದ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದನ್ನು ಅರ್ಥಮಾಡಿಕೊಳ್ಳಬಹುದು. ಚಲಿಸುತ್ತಿರುವ ಚಕ್ರದ ಒಂದು ಕಡ್ಡಿಯನ್ನು ಗಮನಿಸಿದರೆ ಅದು ಕೆಳಗಿನಿಂದ ಮೇಲೆ ಹೋಗುವಾಗ ವೇಗವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ ಮತ್ತು ಮೇಲಿನಿಂದ ಕೆಳಗೆ ಬರುವಾಗ ಅದರ ವೇಗ ಕಡಿಮೆಯಾಗುತ್ತಾ ಹೋಗುತ್ತದೆ. ಚಕ್ರದ ನೆಲಕ್ಕೆ ತಾಕುವ ಭಾಗವು ಆ ಕ್ಷಣಕ್ಕೆ ನಿಶ್ಚಲವಾಗಿರುತ್ತದೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ರೈಲಿನ ಚಕ್ರದಲ್ಲಿ ಇನ್ನೂ ಆಶ್ಚರ್ಯಕರ ಸಂಗತಿಯೊಂದನ್ನು ಗಮನಿಸಬಹುದು. ರೈಲಿನ ಚಕ್ರದ ಕಂಬಿಗೆ ತಾಕುವ ಭಾಗವು ಬೇರೆವಾಹನಗಳಿಗಿಂತ ಭಿನ್ನವಾಗಿರುವುದನ್ನು ನಾವು ನೋಡಿರುತ್ತೇವೆ. ಕಂಬಿಯಮೇಲೆ ಚಕ್ರ ಚಲಿಸುತ್ತಿದ್ದರೆ, ಚಕ್ರದ ಚಪ್ಪಟೆಯಾಕಾರದ ಸ್ವಲ್ಪ ಭಾಗ ಕಂಬಿಯ ಮೇಲ್ಮೈ ಗಿಂತಲೂ ಕೆಳಗಿರುತ್ತದೆ. ರೈಲು ಮುಂದಕ್ಕೆ ಚಲಿಸುತ್ತಿದ್ದರೆ, ಚಕ್ರದ ಈ ಭಾಗಗಳು ಕಂಬಿಯ ಮೇಲ್ಮೈಗಿಂತ ಕೆಳಗಿರುವ ತನಕ ಹಿಂದಕ್ಕೆ ಚಲಿಸುತ್ತಿರುತ್ತವೆ!