3. ರೈಲು ನಿಲ್ದಾಣದಲ್ಲಿ ಹಾಳಿಗಳ ಹತ್ತಿರ ನಿಂತಿದ್ದಾಗ ವೇಗವಾಗಿ ರೈಲು ಚಲಿಸಿದರೆ ನಾವು ಮುಂದಕ್ಕೆ ಬೀಳುವಂತಾಗಲು ಕಾರಣವೇನು?
ಡಾ|| ಎಂ.ಎಸ್.ಚಂದ್ರಶೇಖರ, ಭೌತವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ

ವೇಗವಾಗಿ ರೈಲು ಚಲಿಸುತ್ತಿರುವಾಗ ಅದರ ಸಮೀಪದಲ್ಲಿರುವ ಗಾಳಿಯೂ ಸಹ ವೇಗವಾಗಿ ಚಲಿಸುತ್ತಿರುತ್ತದೆ. ಈ ರೀತಿ ಚಲಿಸುತ್ತಿರುವ ಗಾಳಿಯ ವೇಗ ಮತ್ತು ಆ ಪ್ರದೇಶದ ಒತ್ತಡಗಳ ನಡುವೆ ಸಂಬಂಧವಿದೆ. ವೇಗ ಹೆಚ್ಚಾದಂತೆ ಒತ್ತಡ ಕಡಿಮೆಯಾಗುತ್ತದೆ. ನಮ್ಮ ಎದುರು ರೈಲು ವೇಗವಾಗಿ ಹಾದು ಹೋಗುವಾಗ ನಮ್ಮ ಮತ್ತು ರೈಲಿನ ನಡುವಿನ ಪ್ರದೇಶದ ಒತ್ತಡ ನಮ್ಮ ಹಿಂಬಾಗದ ಪ್ರದೇಶದ ಒತ್ತಡಕ್ಕಿಂತ ಕಡಿಮೆಯಾಗುತ್ತದೆ ಮತ್ತು ನಾವು ರೈಲಿನ ಕಡೆಗೆ ಸೆಳೆಯಲ್ಪಡುತ್ತೇವೆ ವೇಗ ಮತ್ತು ಒತ್ತಡಗಳ ಪರಿಣಾಮಗಳನ್ನು ನಾವು ಅನೇಕ ಸಂದರ್ಭಗಳಲ್ಲಿ ಗಮನಿಸಬಹುದು. ವೇಗವಾಗಿ ಚಲಿಸುತ್ತಿರುವ ಬಸ್ಸಿನ ಹಿಂಭಾಗದಲ್ಲಿ ಒತ್ತಡ ಬಹಳ ಕಡಿಮೆ ಇರುತ್ತದೆ. ಆದ್ದರಿಂದ ಬಸ್ಸು ಆ ಪ್ರದೇಶದಲ್ಲಿನ ದೂಳನ್ನು ತನ್ನೊಡನೆಯೇ ಸೆಳೆದುಕೊಂಡು ಹೋಗುತ್ತಿರುತ್ತದೆ. ಬಸ್ಸಿನ ಹಿಂಭಾಗದಲ್ಲಿ ಹೆಚ್ಚು ದೂಳು ಕಾಣಿಸಿದರೂ ಅದು ಬಸ್ಸಿನೊಡನೆಯೇ ಚಲಿಸುತ್ತಿರುವುದರಿಂದ ಬಸ್ಸಿನ ಹಿಂಭಾಗದಲ್ಲಿ ಹೋಗುವವರಿಗಿಂತ ಬಸ್ಸಿನ ಪಕ್ಕದಲ್ಲಿ ಹೋಗುವವರಿಗೆ ಹೆಚ್ಚು ದೂಳು ಬೀಳುತ್ತದೆ! ದ್ವಿಚಕ್ರವಾಹನ ಸವಾರರು ಇದನ್ನು ಗಮನಿಸಿರುತ್ತಾರೆ.

ಮದುವೆ ಛತ್ರಗಳ ಮುಂಭಾಗದಲ್ಲಿ ಸುಗಂಧ ದ್ರವ್ಯವನ್ನು ಹರಡಲು ಫ್ಯಾನ್‍ಗಳನ್ನು ಹಾಕಿರುತ್ತಾರೆ. ಪ್ಯಾನ್ ರೆಕ್ಕೆಗಳ ಮುಂಬಾಗದಲ್ಲಿ ಚಿಕ್ಕ ಚಿಕ್ಕ ಕೊಳವೆಗಳಿದ್ದು, ಅವುಗಳ ಇನ್ನೊಂದು ತುದಿ ದ್ರವ್ಯದ ಬಟ್ಟಲುಗಳ ಒಳಗಿರುತ್ತದೆ. ಫಾನ್ ತಿರುಗುವಾಗ ಗಾಳಿಯ ಕಣಗಳು ವೇಗವಾಗಿ ಚಲಿಸಿ ಆ ಭಾಗದ ಗಾಳಿಯ ಒತ್ತಡವನ್ನು ಕಡಿಮೆ ಮಾಡುತ್ತವೆ. ಈಗ ಹೆಚ್ಚಿನ ಒತ್ತಡದಿಂದ ಕಡಿಮೆ ಒತ್ತಡವಿರುವ ಪ್ರದೇಶಕ್ಕೆ ಅಂದರೆ ಕೊಳವೆಯ ಮೂಲಕ ಬಟ್ಟಲಿನಿಂದ ಫ್ಯಾನ್ ರೆಕ್ಕೆಗಳ ಮುಂಭಾಗಕ್ಕೆ ಸುಗಂಧ ದ್ರವ್ಯದ ಕಣಗಳು ಚಲಿಸಿ ಗಾಳಿಯೊಡನೆ ಬೆರೆತು ಎಲ್ಲ ಕಡೆ ಹರಡುತ್ತವೆ.