8. ಕೇಂದ್ರಾಭಿಮುಖಿ ಬಲ (centripetal force) ಎಂದರೇನು?
ಡಾ|| ಕೆ. ಎಸ್. ಮಲ್ಲೇಶ್, ಪ್ರಾಧ್ಯಾಪಕರು, ಭೌತವಿಜ್ಞಾನ ಅಧ್ಯಯನ ವಿಭಾಗ ಮಾನಸಗಂಗೋತ್ರಿ, ಮೈಸೂರು

ಚೌಕಟ್ಟೊಂದಕ್ಕೆ ಆಧಾರವಾಗಿ ಕಣವೊಂದು ವೃತ್ತಪಥದಲ್ಲಿ ಸುತ್ತುತ್ತಿದ್ದರೆ ಆ ವಕ್ರೀಯ ಚಲನೆಯನ್ನು ವೃತ್ತೀಯ ಚಲನೆ ಎನ್ನುತ್ತೇವೆ. ಈ ಚಲನೆಯಲ್ಲಿ ಕಣದ ಜವ ಸಮವಿರಬೇಕಾಗಿಲ್ಲ. ಒಂದುವೇಳೆ ಜವ ಸಮವಾಗಿದ್ದಲ್ಲಿ ಆ ಚಲನೆಯನ್ನು ಏಕರೂಪಿ ವೃತ್ತೀಯ ಚಲನೆ ಅಥವಾ ಸಮಜವ ವೃತ್ತೀಯ ಚಲನೆ (uniform circular motion) ಎನ್ನುತ್ತೇವೆ. ಈಗ m ದ್ರವ್ಯರಾಶಿಯ ಕಣವೊಂದು v ಸ್ಥಿರಜವದಿಂದ r ತ್ರಿಜ್ಯವುಳ್ಳ ವ್ರೃತ್ತದ ಮೇಲೆ ಇಂತಹ ಚಲನೆಯನ್ನು ಮಾಡುತ್ತಿದೆ ಎಂದುಕೊಳ್ಳೋಣ. ವೃತ್ತವು ವಕ್ರಪಥವಾದುದರಿಂದ ಮೇಲೆ ತಿಳಿಸಿದಂತೆ ಆ ಕಣದ ಮೇಲೆ ಪ್ರತಿಕ್ಷಣದಲ್ಲೂ ಯಾವುದೋ ಬಲ ವರ್ತಿಸುತ್ತಿರಲೇಬೇಕು. ಈ ಬಲದ ಬೆಲೆ ಒಂದೇ ಇದ್ದು ಇದರ ದಿಕ್ಕು ಸದಾ ವೃತ್ತದ ಕೇಂದ್ರದ ಕಡೆಗಿರುತ್ತದೆ. ಇದನ್ನೇ ಕೇಂದ್ರಾಭಿಮುಖಿ ಬಲ (centripetal force ) ಎಂದು ಕರೆಯುತ್ತಾರೆ. ಸಮಜವ ವೃತ್ತೀಯ ಚಲನೆಯಲ್ಲಿ ಯಾವ ಜಾಗದಲ್ಲಿಯೇ ಆಗಲಿ ಕಣದ ವೇಗ ಆ ಜಾಗದಲ್ಲಿ ವೃತ್ತಕ್ಕೆಳೆದ ಸ್ಪರ್ಶಕದ (tangent) ನೇರದಲ್ಲಿರುತದೆ. ಕಣದ ವೇಗೋತ್ಕರ್ಷವು ಎಲ್ಲಕಡೆ ಕೇಂದ್ರದ ಕಡೆಗಿದ್ದು ಅದರ ಬೆಲೆ a = v2/ r. ನ್ಯೂಟನ್ನ ನಿಯಮದ ಪ್ರಕಾರ ಕಣದ ಮೇಲಿನ ಕೇಂದ್ರಾಭಿಮುಖಿ ಬಲದ ಬೆಲೆ F = mv2/r. ಇದರ ದಿಕ್ಕು ಮೊದಲೇ ತಿಳಿಸಿದಂತೆ ಸದಾ ಕೇಂದ್ರದೆಡೆಗೆ. ವೇಗ, ವೇಗೋತ್ಕರ್ಷ ಮತ್ತು ಬಲಗಳ ದಿಕ್ಕುಗಳನ್ನು ಚಿತ್ರ 4 ರಲ್ಲಿ ಅವುಗಳ ಹತ್ತಿರದಲ್ಲಿರುವ ಸರಳರೇಖೆಗಳ ಮೇಲೆ ಬಾಣದ ಗುರುತುಗಳನ್ನಿಟ್ಟು ತೋರಿಸಲಾಗಿದೆ. ಇವು ಸದಿಶಗಳೆಂದು ಸೂಚಿಸಲು ಆಯಾ ಸಂಕೇತಾಕ್ಷರದ ಮೇಲೆ ಬಾಣದ ಗುರುತಿಟ್ಟಿದೆ.