1. ಜಾಗತಿಕ ತಾಪಮಾನ ಏರಿಕೆ ಎಂದರೇನು?
ಡಾ|| ಶೌಕತ್ ಅರ ಖಾನಂ,

ಜಾಗತಿಕ ತಾಪಮಾನ ಏರಿಕೆಯನ್ನು ಹೀಗೆ ವ್ಯಾಖ್ಯಾನಿಸಬಹುದು “ಇದು ಭೂಮಿಯ ಸರಾಸರಿ ಉಷ್ಣತೆಯ ಹೆಚ್ಚಳ”. ಹೀಗೆ ಹೆಚ್ಚಾಗುತ್ತಿರುವ ಉಷ್ಣತೆಯು ಹಸಿರುಮನೆ ಅನಿಲಗಳಿಂದ ಉಂಟಾಗಿದ್ದು. ಇದರಿಂದ ಚಂಡಮಾರುತ, ಬರಗಾಲ, ಪ್ರವಾಹ ಹಾಗೂ ಇನ್ನಿತರ ಪ್ರಕೃತಿ ವಿಕೋಪಗಳು ಅತಿ ಸಾಮಾನ್ಯವಾಗಿವೆ.

20ನೇ ಶತಮಾನದ ಪ್ರಾರಂಭದಿಂದ ಅಂತ್ಯದವರೆಗಿನ ಅಂಕಿಅಂಶಗಳ ಪ್ರಕಾರ ಭೂಮಿಯ ಮೇಲ್ಮ್ಯೆ ಉಷ್ಣತೆಯು ಸುಮಾರು 0.74 ಡಿಗ್ರಿ ಸೆ. ನಷ್ಟು ಹೆಚ್ಚಾಗಿದೆ. ಮಾನವನ ಶೋಷಣಾ ಪ್ರಕಾರವಾದ ಅತಿಯಾದ ದಹನಕ್ರಿಯೆ ಹಾಗೂ ಅರಣ್ಯನಾಶದಂತಹ ಚಟುವಟಿಕೆಗಳಿಂದ ಬಿಡುಗಡೆಯಾದ ಹಸಿರುಮನೆ ಅನಿಲಗಳಿಂದ ಈ ಹೆಚ್ಚಳವು ಉಂಟಾಗಿದೆ. ಇದರ ಪ್ರಮುಖ ಪರಿಣಾಮವೆಂದರೆ ಸಾಗರಮಟ್ಟದ ಏರಿಕೆ ಹಾಗೂ ವಿಸ್ತರಿಸುತ್ತಿರುವ ಮರುಭೂಮೀಕರಣ.

ಈ ತಾಪಮಾನದ ಬಿಸಿ ಮೊದಲಿಗೆ ತಾಗುತ್ತಿರುವ ಭೂಪ್ರದೇಶವೆಂದರೆ ಭೂಮಿಯ ಉತ್ತರಾರ್ಧಗೋಳ. ಇದರಿಂದಾಗಿ ಹಿಮಗಡ್ಡೆಗಳು, ಪರ್ಮಾಫ್ರಾಸ್ಟ್ ಪದರಗಳು ಕರಗುತ್ತಿದ್ದು ಸಾಗರದ ಮಟ್ಟ ಏರಿಕೆಗೆ ಕಾರಣವಾಗಿದೆ. ತಾಪಮಾನ ಏರಿಕೆಯ ಇತರ ಪರಿಣಾಮಗಳೆಂದರೆ, ಹವಾಮಾನ ವೈಪರೀತ್ಯ, ವಿವಿಧ ಪ್ರಭೇದಗಳ ಅಳಿಕೆ, ಹಾಗೂ ವ್ಯವಸಾಯದ ಇಳುವರಿಯ ಇಳಿಕೆ. ಈ ಎಲ್ಲ ಅಂಶಗಳೂ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿವೆ.

ಜಾಗತಿಕ ತಾಪಮಾನ ಏರಿಕೆ ಹಾಗೂ ಅಚರ ಪರಿಣಾಮಗಳ ವಿಷಯವಾಗಿ ರಾಜಕೀಯದಲ್ಲಿ ಹಾಗೂ ಸಾರ್ವಜನಿಕವಾಗಿ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಈ ಚರ್ಚೆಗಳು, ಗೋಷ್ಠಿಗಳಿಗಿಂತಲೂ ಮಿಗಿಲಾಗಿ, ತಾಪಮಾನ ಏರಿಕೆಯನ್ನು ಕಡಿಮೆಮಾಡುವುದನ್ನು ಕಾರ್ಯಗತಮಾಡುವುದೇ ನಮ್ಮ ಮುಂದಿರುವ ಬಹುಮುಖ್ಯ ಕರ್ತವ್ಯವಾಗಿದೆ. ಇದಕ್ಕೆಲ್ಲಾ ಮೂಲ ಕಾರಣವಾದ ಹಸಿರುಮನೆ ಅನಿಲಗಳ ಬಿಡುಗಡೆಯನ್ನು ಕಡಿಮೆ ಮಾಡುವುದನ್ನೇ ಗುರಿಯಾಗಿಟ್ಟುಕೊಂಡು ಹಲವು ಸರ್ಕಾರಗಳು ರಾಷ್ಟ್ರೀಯ ಮಟ್ಟದಲ್ಲಿ ಕೆಲವೊಂದು ನಿಯಮಾವಳಿಗಳನ್ನು ರೂಪಿಸಿಕೊಂಡಿವೆ.