2. ಹಸಿರುಮನೆ ಪರಿಣಾಮ ಎಂದರೇನು?
ಡಾ|| ಶೌಕತ್ ಅರ ಖಾನಂ, ರಸಾಯನ ಶಾಸ್ತ್ರ ವಿಭಾಗ ಯುವರಾಜ ಕಾಲೇಜು, ಮೈಸೂರು.

ವಾತಾವರಣದ ಅನಿಲಗಳು ಅವಗೆಂಪುಕಿರಣಗಳನ್ನು ಹೀರುವುದು ಮತ್ತು ಉತ್ಸರ್ಜಿಸುವ ಮೂಲಕ ಯಾವುದೇ ಗ್ರಹದ ವಾತಾವರಣದ ಉಷ್ಣತೆಯನ್ನು ಹೆಚ್ಚಿಸುವ ವಿದ್ಯಮಾನವನ್ನೇ ನಾವು ಹಸಿರುಮನೆ ಪರಿಣಾಮ ಎಂದು ಕರೆಯುತ್ತೇವೆ. 1820ರಲ್ಲಿ ಇದನ್ನು ಕಂಡುಹಿಡಿದ ಕೀರ್ತಿಯು ಜೋಸೆಫ್ ಫೋರಿಯರ್ಗೆ ಸಲ್ಲುತ್ತದೆ. ಆದರೆ, 1896ರಲ್ಲಿ ಈ ವಿಷಯವನ್ನು ಪ್ರಯೋಗದ ಮೂಲಕ ಪರಿಣಾಮಾಣಾತ್ಮಕವಾಗಿ ದೃಢಪಡಿಸಿದ ಕೀರ್ತಿ ಸ್ವಾಂಟ್ ಅರೀನಿಯಸ್ರವರದ್ದು.

ಭೂಮಿಯ ಉಷ್ಣಾಂಶ ಹೆಚ್ಚಲು ಮುಖ್ಯ ಕಾರಣ ಮಾನವನ ಚಟುವಟಿಕೆ ಎಂಬುದನ್ನು ಹಲವರು ಒಪ್ಪುವುದಿಲ್ಲ. ಆದರೆ, ಉಷ್ಣಾಂಶ ಹೆಚ್ಚಲು ಕಾರಣ ಹಸಿರುಮನೆ ಅನಿಲಗಳು ಎಂಬ ವಿಚಾರವನ್ನು ಅವರೂ ಸಹ ಒಪ್ಪಲೇಬೇಕಾಗುತ್ತದೆ. ಈಗಿರುವ ಚರ್ಚಾ ವಿಷಯವೆಂದರೆ, ಈ ಅನಿಲಗಳು ಯಾವ ವೇಗದಲ್ಲಿ ಉಷ್ಣಾಂಶ ಹೆಚ್ಚಿಸುತ್ತಿವೆ ಎಂಬುದು. ಹಸಿರುಮನೆ ಪರಿಣಾಮಕ್ಕೆ ಕಾರಣವಾದ ಅನಿಲಗಳು ಈ ರೀತಿಯಾಗಿವೆ.

1. ನೀರಾವಿ (36-70%) 2. ಕಾರ್ಬನ್-ಡೈ-ಆಕ್ಸೈಡ್ (9-26%)

3. ಮೀಥೇನ್ (4-9%) 4. ಓಜೋನ್ (3-7%)

ಮೋಡಗಳು ವಿಕಿರಣ ಸಮತೋಲದ ಮೇಲೆ ಪರಿಣಾಮ ಬೀರಿದರೂ ಕೂಡ, ಅವುಗಳಲ್ಲಿ ನೀರು ದ್ರವರೂಪ ಅಥವಾ ಮಂಜುಗಡ್ಡೆ (ಘನ) ರೂಪದಲ್ಲಿರುವುದರಿಂದ ಇವು ನೀರಾವಿಗಿಂತ ವಿಭಿನ್ನ ಪರಿಣಾಮ ಹೊಂದಿವೆ. ಕೈಗಾರಿಕಾಕ್ರಾಂತಿಯೂ ಸಹ ವಾತಾವರಣದ ಕಾರ್ಬನ್-ಡೈ-ಆಕ್ಸೈಡ್, ಮೀಥೇನ್, ಓಜೋನ್, ಸಿ.ಎಫ್.ಸಿ.ಗಳು, ಹಾಗೂ ನೈಟ್ರಸ್ ಆಕ್ಸೈಡ್ ಮುಂತಾದ ಹಸಿರುಮನೆ ಅನಿಲಗಳ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಿದೆ. 1750ರಿಂದ ಈಚೆಗೆ, ಕಾರ್ಬನ್-ಡೈ-ಆಕ್ಸೈಡ್ ಹಾಗೂ ಮೀಥೇನ್ಗಳ ಪೃಮಾಣವು ಕ್ರಮವಾಗಿ36% ಮತ್ತು 148%ನಷ್ಟು ಹೆಚ್ಚಾಗಿದೆ. ಒಂದು ಅಂಕಿಅಂಶಗಳ ಪ್ರಕಾರ ಸುಮಾರು 650 ಸಾವಿರ ವರ್ಷಗಳಿಂದ ಈಚೆಗೆ, ಮಂಜುಗಡ್ಡೆಯ ಒಟ್ಟು ಪ್ರಮಾಣದ ವ್ಯತ್ಯಾಸವು ಬಹಳವಾಗಿದ್ದು, ಈ ವ್ಯತ್ಯಾಸಕ್ಕೆ ಕಾರಣ ಹಸಿರುಮನೆ ಅನಿಲಗಳು ಎಂದು ಅಂದಾಜಿಸಲಾಗಿದೆ.

ಮುಂದಿನ ದಿನಗಳಲ್ಲಾಗುವ ಹೆಚ್ಚಳವು, ಜಗತ್ತಿನ ಆರ್ಥಿಕ, ಸಾಮಾಜಿಕ, ತಾಂತ್ರಿಕ ಹಾಗೂ ನೈಸರ್ಗಿಕ ಬೆಳವಣಿಗೆಗಳಂತಹ ಅಂಶಗಳನ್ನೊಳಗೊಂಡಿದೆ. ಅದರ ಪ್ರಕಾರ, ಹಸಿರುಮನೆ ಅನಿಲಗಳ ಬಿಡುಗಡೆಯ ಬಗ್ಗೆ ವಿಶೇಷ ವರದಿ ಪ್ರಾಧಿಕಾರವಾದ ಐ.ಪಿ.ಸಿ.ಸಿ. ಘಟಕವು ವರದಿಮಾಡುವಂತೆ, 2100ರ ಹೊತ್ತಿಗೆ, ಸುಮಾರು 541ರಿಂದ 970 ಪಿ.ಪಿ.ಎಂ. ನಷ್ಟು ಹೆಚ್ಚಳ ಎಂದು ಅಂದಾಜಿಸಿದೆ. (ಅಂದರೆ, 1750ರಿಂದೀಚೆಗೆ, ಸುಮಾರು 90ರಿಂದ 250%ನಷ್ಟು). ಈ ಮಟ್ಟವನ್ನು ತಲುಪಲು ಇಂದು ನಾವು ಉಪಯೋಗಿಸುತ್ತರುವ ಪಳಯುಳಿಕೆ ಇಂಧನಗಳೇ ಸಾಕು.

ಇದರೊಟ್ಟಿಗೆ, ಜಾಗತಿಕ ತಾಪಮಾನದ ಏರಿಕೆಗೆ ಕಾರಣವಾದ ಇನ್ನೊಂದು ಪ್ರಮುಖ ಅಂಶವೆಂದರೆ, ಓಜೋನ್ ಪದರದ ನಾಶ. ಓಜೋನ್ನಲ್ಲಿ ಮುಖ್ಯವಾಗಿ ಎರಡು ಪ್ರದೇಶಗಳನ್ನು ಗುರುತಿಸಬಹುದು. ಅತಿ ಎತ್ತರದ ಓಜೋನ್ ಪದರದ ಕ್ಷೀಣತೆಯು ತಂಪು ವಾತಾವರಣ ಉಂಟುಮಾಡಿದರೆ, ಭೂಮಿಗೆ ಹತ್ತಿರದ ಓಜೋನ್ ಪದರದ ಕ್ಷೀಣತೆಯು ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಅದರಲ್ಲೂ 1970ರಿಂದೀಚೆಗೆ ಸಿ.ಎಫ್.ಸಿ.ಗಳಿಂದ ಉಂಟಾಗುತ್ತಿರುವ ಓಜೋನ್ ನಾಶವು ಭೂಮಿಯ ಮೇಲ್ಮೈ ಉಷ್ಣತೆ ಏರಿಕೆಗೆ ಪ್ರಮುಖ ಕಾರಣವಾಗಿದೆ.