3. ಜಾಗತಿಕ ತಾಪಮಾನ ಏರಿಕೆಗೆ ಕಾರಣಗಳೇನು?
ಡಾ|| ಶೌಕತ್ ಅರ ಖಾನಂ, ರಸಾಯನ ಶಾಸ್ತ್ರ ವಿಭಾಗ ಯುವರಾಜ ಕಾಲೇಜು, ಮೈಸೂರು.

ಈ ಮೊದಲೇ ಪ್ರಸ್ತಾಪಿಸಿದಂತೆ, ಜಾಗತಿಕ ತಾಪಮಾನ ಏರಿಕೆಗೆ ಅತಿಮುಖ್ಯ ಕಾರಣವೆಂದರೆ, ಕಾರ್ಬನ್-ಡೈ-ಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್ಗಳಂತಹ ಹಸಿರುಮನೆ ಅನಿಲಗಳು. ಕಾರ್ಬನ್-ಡೈ-ಆಕ್ಸೈಡ್ನ ಮುಖ್ಯ ಮೂಲವೆಂದರೆ, ಉಷ್ಣಸ್ಥಾವರಗಳು. ಈ ಘಟಕಗಳು ವಿದ್ಯುತ್ ಉತ್ಪತ್ತಿಗಾಗಿ ಉರಿಸುವ ಪಳಯುಳಿಕೆ ಇಂಧನಗಳಿಂದ ಅಗಾಧ ಪ್ರಮಾಣದ ಕಾರ್ಬನ್-ಡೈ-ಆಕ್ಸೈಡ್ ವಾತಾವರಣ ಸೇರುತ್ತಿದೆ. ವಾತಾವರಣದ ಶೇ. 20ರಷ್ಟು ಕಾರ್ಬನ್-ಡೈ-ಆಕ್ಸೈಡ್ ವಾಹನಗಳಲ್ಲಿ ಗ್ಯಾಸೋಲಿನ್ಗಳ ದಹನಕ್ರಿಯೆಯಿಂದಾಗಿ ಬಿಡುಗಡೆಯಾಗುತ್ತಿದೆ. ಈ ಪರಿಸ್ಥಿತಿಯನ್ನು ನಾವು ಸಾಕಷ್ಟು ಮುಂದುವರೆದ ದೇಶಗಳಲ್ಲಿ ಕಾಣಬಹುದು. ಆದರೆ, ಜಾಗತಿಕ ತಾಪಮಾನ ಏರಿಕೆಗೆ ಕಾರು ಹಾಗೂ ಟ್ರಕ್ಗಳ ಪಾಲಿಗಿಂತಲೂ ಕಟ್ಟಡಗಳ ನಿರ್ಮಾಣಕ್ಕಾಗಿ ಭೂಅಗೆತದ ಪಾತ್ರವೇ ಹೆಚ್ಚಾಗಿದೆ ಎಂದರೆ ಆಶ್ಚರ್ಯವಾಗಬಹುದು. ಈ ವಾಣಿಜ್ಯ ಕಟ್ಟಡಗಳಾಗಲೀ ವಾಸಿಸಲು ಬಳಸುವ ಕಟ್ಟಡಗಳಾಗಲೀ ಇವುಗಳನ್ನು ನಿರ್ಮಿಸಲು ಸಾಕಷ್ಟು ಇಂಧನ ಬಳಸಬೇಕಾಗುತ್ತದೆ. ಈ ಇಂಧನಗಳಿಂದ ಯಥಾಪ್ರಕಾರ ಕಾರ್ಬನ್-ಡೈ-ಆಕ್ಸೈಡ್ ಏರಿಕೆ. ಮೀಥೇನ್ ಅನಿಲವು ಶಾಖವನ್ನು ಹಿಡಿದಿಡುವುದರಲ್ಲಿ ಕಾರ್ಬನ್-ಡೈ_ಆಕ್ಸೈಡ್ನಷ್ಟೇ ಪರಿಣಾಮಕಾರಿಯಾಗಿದೆ. ಈ ಮೀಥೇನ್ ಅನಿಲದ ಮೂಲವೆಂದರೆ, ಅಕ್ಕಿ, ಭತ್ತ, ಬ್ಯಾಕ್ಟೀರಿಯಾ ಹಾಗೂ ಫಾಸಿಲ್ ಇಂಧನಗಳ ಶುದ್ಧೀಕರಣ. ಒಮ್ಮೆ ಪ್ರವಾಹ ಬಂದರೆ, ಭೂಮಿಯ ಮೇಲಿನ ಸಾವಯವಗಳನ್ನು ಬ್ಯಾಕ್ಟೀರಿಯಾಗಳು ಆಮ್ಲಜನಕರಹಿತ ಉಸಿರಾಟ ನಡೆಸುವ ಮೂಲಕ ವಿಘಟಿಸುತ್ತವೆ. ಈ ಕ್ರಿಯೆಯಲ್ಲಿಯೂ ಸಾಕಷ್ಟು ಮೀಥೇನ್ ಬಿಡುಗಡೆಯಾಗುತ್ತದೆ.

ಇನ್ನು ನೈಟ್ರಸ್ ಆಕ್ಸೈಡ್ನ ಮೂಲವೆಂದರೆ, ನೈಲಾನ್ ಹಾಗೂ ನೈಟ್ರಿಕ್ ಆಮ್ಲದ ಉತ್ಪಾದನಾ ಘಟಕಗಳು. ವ್ಯವಸಾಯದಲ್ಲಿ ಗೊಬ್ಬರಗಳ ಬಳಕೆ ಹಾಗೂ ಸಾವಯವ ವಸ್ತುಗಳ ದಹನಕ್ರಿಯೆಯೂ ಸಹ ನೈಟ್ರಸ್ ಆಕ್ಸೈಡನ್ನು ಉಂಟುಮಾಡುತ್ತವೆ.

ಜಾಗತಿಕ ತಾಪಮಾನ ಏರಿಕೆಗೆ ಮತ್ತೊಂದು ಪ್ರಮುಖಾಂಶವೆಂದರೆ, ಅರಣ್ಯನಾಶ. ಗೃಹೋಪಯೋಗಕ್ಕಾಗಿ ಹಾಗೂ ಕೈಗಾರಿಕೀಕರಣಕ್ಕಾಗಿ ಮರಗಳನ್ನು ಕಡಿಯುವುದು. ಈ ಅರಣ್ಯನಾಶ ಕ್ರಮೇಣ ಮರುಭೂಮೀಕರಣವಾಗಿ ಪರಿಣಮಿಸುತ್ತದೆ.