4. ದಹ್ಯ ವಸ್ತು ಮತ್ತು ದಹನಾನುಕೂಲಿಗಳೆಂದರೇನು?
ಡಾ. ಜಿ.ಆರ್. ಪ್ರಕಾಶ್ ರಸಾಯನ ಶಾಸ್ತ್ರದ ಸಹ ಪ್ರಾಧ್ಯಾಪಕರು ರೀಜನಲ್ ಇನ್ ಸ್ಟಿಟ್ಯೂಟ್ ಆಫ್ ಎಜುಕೇಶನ್, ಮೈಸೂರು

ದಹ್ಯ ವಸ್ತು ಎಂದರೆ ಉರಿಯುವ(ಹೊತ್ತಿಕೊಳ್ಳುವ) ವಸ್ತುಗಳು. ಘನ, ದ್ರವ ಅಥವ ಅನಿಲ ರೂಪದಲ್ಲಿರುವ ದಹ್ಯ ವಸ್ತುಗಳು ಅನೇಕವಿದ್ದು ಹಲವಾರು ನಮ್ಮ ನಿತ್ಯ ಜೀವನದಲ್ಲೂ ಉಪಯುಕ್ತವಾಗಿವೆ. ಘನ ರೂಪದ ವಸ್ತುಗಳಲ್ಲಿ ಕಾಗದ, ಒಣಗಿದ ಮರ, ಇದ್ದಿಲು ಮುಂತಾದವು. ದ್ರವ ರೂಪದಲ್ಲಿರುವ ದಹ್ಯವಸ್ತುಗಳಲ್ಲಿ ಪೆಟ್ರೋಲ್, ಸೀಮೇಎಣ್ಣೆ, ಮದ್ಯಸಾರ ಮುಂತಾದವುಗಳು. ಅನಿಲಗಳಾದ ಅಡಿಗೆ ಅನಿಲ(ಎಲ್.ಪಿ.ಜಿ), ಜಲಜನಕ ಮುಂತಾದವುಗಳು ದಹ್ಯವಸ್ತುಗಳು.

ದಹನಾನುಕೂಲಿಗಳೆಂದರೆ ಉರಿಯುವ ವಸ್ತುಗಳಿಗೆ ಸಹಾಯಮಾಡುವ ವಸ್ತುಗಳು. ಸಾಮಾನ್ಯವಾಗಿ ದಹನಾನುಕೂಲಿಗಳಾಗಿ ಅನಿಲಗಳನ್ನೇ ಪರಿಗಣಿಸುತ್ತೇವೆ. ಆಮ್ಲಜನಕ, ಕ್ಲೋರಿನ್ ಮುಂತಾದ ಅನಿಲಗಳು ದಹನಾನುಕೂಲಿಗಳು. ಗಾಳಿಕೂಡ ದಹನಾನುಕೂಲಿಯಾಗಿರಲು ಅದರಲ್ಲಿರುವ ಆಮ್ಲಜನಕವೇ ಕಾರಣ. ದಹನಾನುಕೂಲಿಗಳಲ್ಲದ ಅನಿಲಗಳಲ್ಲಿ ಇಂಗಾಲದಡೈಆಕ್ಸೈಡ್, ಸಾರಜನಕ, ಜಲಜನಕ ಕೆಲವು. ಜಲಜನಕ ದಹ್ಯವಸ್ತುವಾದರೂ ದಹನಾನುಕೂಲಿಯಲ್ಲ. ಇದನ್ನು ನಾವು ಪರೀಕ್ಷಿಸಬೇಕಾದರೆ ಅನಿಲದ ಜಾಡಿಗೆ ಒಂದು ಉರಿಯುತ್ತಿರುವ ಮೇಣದಬತ್ತಿಯನ್ನು ಇಟ್ಟಾಗ ತಿಳಿಯುತ್ತದೆ. ದಹನಾನುಕೂಲಿ ಅನಿಲವಾದರೆ ಮೇಣದಬತ್ತಿ ಉರಿಯುತ್ತಲೇ ಇರುತ್ತದೆ. ಅಲ್ಲದಿದ್ದರೆ ಆರಿಹೋಗುತ್ತದೆ. ಹಾಗೆಯೇ ದಹ್ಯವಸ್ತು ವಾದರೆ ಅನಿಲವೇ ಹೊತ್ತಿಕೊಳ್ಳುವುದು. ಇಲ್ಲದಿದ್ದರೆ ಹೊತ್ತಿಕೊಳ್ಳುವುದಿಲ್ಲ.