12. ಮಿಶ್ರ ಪಾಲಿಮರ್ ಎಂದರೇನು? ಇದರ ಪ್ರಾಮುಖ್ಯತೆ ಬಗ್ಗೆ ತಿಳಿಸಿ.
.

ಯಾವುದೇ ನಿರ್ದಿಷ್ಟ ಬಳಕೆಗನುಗುಣವಾಗಿ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಪಾಲಿಮರ್‍ಗಳನ್ನು ಬೆರೆಸಿ ಹೊಸ ಉತ್ಪನ್ನವಾಗಿ ತಯಾರುಮಾಡುವುದನ್ನು ಮಿಶ್ರ ಪಾಲಿಮರ್ ಅಥವಾ ಪಾಲಿಮರ್ ಬ್ಲೆಂಡ್ ಎನ್ನುವರು. ಸಾಮಾನ್ಯವಾಗಿ ಯಾವುದಾದರೊಂದು ಪಾಲಿಮರ್‍ನ ಕೊರತೆಯನ್ನು ನೀಗಿಸಲು ಇನ್ನೊಂದು ಪಾಲಿಮರ್‍ನೊಡನೆ ಹೊಂದುವ ಬಂಧ ಆ ಮಿಶ್ರಣದ ಒಟ್ಟು ಗುಣವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ.

1940ರಲ್ಲಿ ಕಂಡುಕೊಂಡ ಈ ವಿಧಾನ 1960ರ ಹೊತ್ತಿಗೆ ವಾಣಿಜ್ಯಾತ್ಮಕ ಬಳಕೆಗೆ ಬಂದಿತು. ನಾವಿಂದು ದೈನಂದಿನ ಬಳಕೆಯಲ್ಲಿ ಉಪಯೋಗಿಸುತ್ತಿರುವ ಅನೇಕ ಪ್ಲಾಸ್ಟಿಕ್‍ಗಳು ಮಿಶ್ರ ಪಾಲಿಮರ್ ಗುಂಪಿಗೆ ಸೇರಿವೆ. ಮುಖ್ಯವಾಗಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್, ಟ್ಯಾಬ್‍ಲೆಟ್, ಐಪಾಡ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ, ವಾಹನಗಳ ಒಳ ಸೂಕ್ಷ್ಮ ಉಪಕರಣಗಳಲ್ಲಿ, ಹೆಲ್ಮೆಟ್ ತಯಾರಿಕೆಯಲ್ಲಿ ಇವುಗಳನ್ನು ಉಪಯೋಗಿಸಲಾಗುತ್ತಿದೆ. ಇದಕ್ಕೆ ಒಂದು ಕಾರಣ, ಶುಭ್ರ ಪಾಲಿಮರ್‍ನಲ್ಲಿ ಪಡೆಯಲಾಗದ ಅನೇಕ ಗುಣ ಅಥವಾ ಸಾಮಥ್ರ್ಯವನ್ನು ಪಾಲಿಮರ್ ಮಿಶ್ರಣ ಕ್ರಿಯೆಯಿಂದ ಸಾಧಿಸಬಹುದಾಗಿರುವುದು.

ಉದಾಹರಣೆಗೆ ಒಂದು ಕಾರಿನ ಬಂಪರ್ ತಯಾರಿಕೆಯಲ್ಲಿ ಂಃS ಎಂಬ ಮಿಶ್ರ ಪಾಲಿಮರ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ABS ಅಂದರೆ, Acrylo nitryl butadiene styrene. ಇದರಲ್ಲಿ Acrylo nitryl, butadiene, styrene ಎಂಬ ಮೂರು ಬೇರೆ ಬೇರೆ ಪಾಲಿಮರ್‍ಗಳ ಮಿಶ್ರಣ ಇರುತ್ತದೆ. ಬಂಪರ್‍ನ ಮುಖ್ಯ ಕೆಲಸ ಕಾರಿಗೆ ಎದುರಾಗುವ ಅಪಘಾತದಲ್ಲಿ ತಾನು ನಾಶವಾದರೂ ಚಕ್ರ ಹಾಗು ಎಂಜಿನ್‍ಗೆ ಧಕ್ಕೆಯಾಗದಂತೆ ತಡೆಯುವಂತದ್ದಾಗಿದೆ. ಅಂದರೆ ಬಂಪರ್ ತಯಾರಿಕೆಗೆ ಬಳಸಲಾಗುವ ಪಾಲಿಮರ್ ಕ್ಷಣ ಮಾತ್ರದಲ್ಲಿ ಅಪ್ಪಳಿಸಬಲ್ಲ ಅಗಾಧ ಪರಿಣಾಮವನ್ನು ತಡೆಯುವ ಗುಣ ಹೊಂದಿರಲೇಬೇಕು. ಈ ಗುಣ ಪ್ಲಾಸ್ಟಿಕ್‍ಗಳಿಗಿಂತ ರಬ್ಬರ್‍ಗಳಲ್ಲಿ ಇರುವುದರಿಂದ ಈ ಪಾಲಿಮರ್ ಮಿಶ್ರಣದಲ್ಲಿ ರಬ್ಬರ್ ಇರಬೇಕು. ABSನಲ್ಲಿ Polybutadiene ಎಂಬ ರಬ್ಬರ್ ಅನ್ನು ಇದೇ ಕಾರಣಕ್ಕೆ ಬಳಸುತ್ತಾರೆ.

ಈ ವಿಧಾನ ಪ್ರಸ್ತುತ ಬಳಕೆಯಲ್ಲಿರುವ ಪಾಲಿಮರ್‍ಗಳ ಹೊಸ ರೂಪಕ್ಕೆ ದಾರಿಮಾಡಿಕೊಡುವುದಲ್ಲದೆ, ಸಾಮಾನ್ಯ ಬಂಡವಾಳದಲ್ಲಿ ಉತ್ತಮ ಸಿದ್ಧ ವಸ್ತು ಪಡೆಯಲು ಸಹಕಾರಿಯಾಗಿವೆ. ಆದರೆ ಇದರಿಂದ ತಯಾರಾದ ವಸ್ತುವಿನ ‘ಬಳಕೆಯ ತುದಿ’ಯ ಆಧಾರದ ಮೇಲೆ ಇದರ ದರ ನಿಗದಿಯಾಗುವುದರಿಂದ ಮಿಶ್ರ ಪಾಲಿಮರ್‍ಗಳ ಬೆಲೆ ವಿಸ್ತಾರವಾಗಿ ತೋರುತ್ತದೆ.