1. ಶೂನ್ಯದ ಜನಕ ಯಾರು?
ಡಾ. ಆರ್.ರಂಗರಾಜನ್, ಗಣಿತ ಶಾಸ್ತ್ರ ಪ್ರವಾಚಕರು, ಮೈಸೂರು ವಿಶ್ವವಿಧ್ಯಾನಿಲಯ, ಮಾನಸಗ0ಗೋತ್ರಿ, ಮೈಸೂರು.

‘ಶೂನ್ಯ’ ಭಾರತೀಯರ ಕೊಡುಗೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ಹೆಮ್ಮೆಯ ಸಂಗತಿ. ಈ ಸಾಲಿನಲ್ಲಿ ಧನಸಂಖ್ಯೆ ಹಾಗೂ ದಶಮಾಂಶಗಳೂ ಸಹ ಭಾರತೀಯರ ಅದ್ಭುತ ಕೊಡುಗೆಗಳು. ದಶಮಾನ ಪದ್ದತಿಯ ಸಂಖ್ಯೆಗಳು ಹಾಗೂ ಅವುಗಳ ಅಂಕಗಣಿತ ಪ್ರಕ್ರಿಯೆಗಳು ಹಲವು ವಿಜ್ಞಾನದ ಸಾಧನೆಗಳಿಗೆ ಅಡಿಪಾಯವಾದವು ಎಂಬುದು ಶ್ರೇಷ್ಠ ವಿಜ್ಞಾನಿಗಳ ಅಭಿಮತ. ದಶಮಾನ ಪದ್ದತಿಯಲ್ಲಿ ಹತ್ತರ ಘಾತಗಳನ್ನು ಬಳಸಿ ಅತೀ ದೊಡ್ಡ ಸಂಖ್ಯೆ ಹಾಗೂ ಅತೀ ಸಣ್ಣ ಸಂಖ್ಯೆ ಬರೆಯಬಹುದು ಎಂಬ ವಿಚಾರ ನಮಗೆಲ್ಲಾ ತಿಳಿದಿದೆ. ಶೂನ್ಯದ ಸಹಾಯವಿಲ್ಲದೆ ಇಂತಹ ಸಂಖ್ಯೆಗಳನ್ನು ವಿಸ್ತರಿಸಿ ಬರೆಯುವುದು ಸುಲಭವಲ್ಲ ಎಂಬ ಅಂಶ ಶೂನ್ಯದ ಮಹತ್ವವನ್ನು ಸಾರುತ್ತದೆ. ಇನ್ನೊಂದು ಮಹತ್ವದ ವಿಷಯವೆಂದರೆ, ಪೂರ್ಣಾಂಕವಲ್ಲದೆ ಅದರೊಂದಿಗೆ ಇರುವ ಶೂನ್ಯಕ್ಕೆ ಸಮೀಪವಾದ ದಶಮಾಂಶಗಳ ಕರಾರುವಕ್ಕಾದ ಲೆಕ್ಕಾಚಾರ ಇಂದಿನ ಯಾವುದೇ ವೈಜ್ಞಾನಿಕ ಮಾಹಿತಿಗಳನ್ನು ವಿಶ್ಲೇಷಿಸುವಾಗ ಬಹಳ ಅವಶ್ಯಕವಾಗುತ್ತದೆ. ಶೂನ್ಯದ ಜನಕ ಯಾರು ಎಂದು ತಿಳಿಯಲು ನಮ್ಮ ಪ್ರಾಚೀನ ಭಾರತೀಯ ಗಣಿತ ಗ್ರಂಥಗಳ ಬಗ್ಗೆ ತಿಳಿಯುವುದು ಅತ್ಯವಶ್ಯಕ. ಆರ್ಯಭಟರ ‘ಆರ್ಯಭಟೀಯಂ’, ಬ್ರಹ್ಮಗುಪ್ತರ ‘ಬ್ರಹ್ಮಸ್ಫುಟ ಸಿದ್ದಾಂತ’, ಮಹಾವೀರಚಾರ್ಯರ ‘ಗಣಿತಸಾರ ಸಂಗ್ರಹ’, ಭಾಸ್ಕರಚಾರ್ಯರ ‘ಲೀಲಾವತಿ’ ಇನ್ನು ಮುಂತಾದವುಗಳು ಪ್ರಾಚೀನ ಭಾರತೀಯ ಗಣಿತದ ಅದ್ಗ್ರಂಥಗಳು. ಈ ಗ್ರಂಥಗಳು ಗಣಿತಶಾಸ್ತ್ರ, ಖಗೋಳಶಾಸ್ತ್ರ ಇತ್ಯಾಧಿಗಳನ್ನು ವಿವರಿಸುತ್ತವೆ. ಕಾಲಮಾನದ ನಿಕರತೆಯಲ್ಲಿ ನಮ್ಮ ಭಾರತೀಯ ಗಣಿತಜ್ಞರು ಮೇಲುಗೈ ಸಾಧಿಸಿದ್ದರು ಎಂಬುದು ಹೆಮ್ಮೆಯ ಸಂಗತಿ. ಉದಾ: ಗ್ರಹಗಳ ಪರಿಭ್ರಮಣ ಕಾಲ, ಗ್ರಹಣಕಾಲಗಳ ಬಗ್ಗೆ ಅವರು ನೀಡಿರುವ ಮಾಹಿತಿ ಎಂತಹವರನ್ನೂ ಸೋಜಿಗಗೊಳಿಸುತ್ತದೆ. ಈ ಗ್ರಂಥಗಳಲ್ಲಿ ಶೂನ್ಯದ ವಿವರಣೆ ಹಾಗೂ ಅದರ ಅಂಕಗಣಿತ ಪ್ರಕ್ರಿಯಗಳ ನಿಯಮಗಳು ಚೆನ್ನಾಗಿ ವಿವರಿಸಲ್ಪಟ್ಟಿವೆ. ಆದರೆ ಎಲ್ಲಿಯೂ ಶೂನ್ಯದ ಜನಕ ಯಾರು ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಶೂನ್ಯದ ಪರಿಕಲ್ಪನೆ ಮೊಟ್ಟಮೊದಲು ಕಂಡುಬಂದಿರುವುದು ಭಾರತೀಯ ತತ್ವಶಾಸ್ತ್ರಗಳಲ್ಲಿ ಎಂಬುದು ಹೆಚ್ಚಿನ ಇತಿಹಾಸಕಾರರ ಅಭಿಪ್ರಾಯ. ಬೌದ್ದಧರ್ಮದ ಶೂನ್ಯತೆ, ಗೀತಾಶಾಸ್ತ್ರದ ಸ್ಥಿತಪ್ರಜ್ಞತೆ ಮುಂತಾದವುಗಳು ಈ ಅಭಿಪ್ರಾಯಕ್ಕೆ ಪುಷ್ಠಿ ನೀಡುತ್ತವೆ. ಉದಾಹರಣೆಗೆ ಎಲ್ಲರಿಗೂ ತಿಳಿದಿರುವ ಭಗವಾನ್ ಬುದ್ದನ ಉಪದೇಶ ಹೀಗಿದೆ: ನಾವು ಹುಟ್ಟುವಾಗ ಜಗತ್ತಿಗೆ ತಂದಿದ್ದು ಶೂನ್ಯ; ನಾವು ಸಾಯುವಾಗ ಇಲ್ಲಿಂದ ಕೊಂಡೊಯ್ಯುವುದು ಶೂನ್ಯ; ಇವುಗಳ ನಡುವೆ ಇರುವಷ್ಟು ದಿನ ವೈರಾಗ್ಯ, ಸೇವೆಗಳಿಂದ ತಮ್ಮ ಉದ್ದಾರ ಮಾಡಿಕೊಳ್ಳುವುದು ಒಳಿತು. ಇಲ್ಲಿ ನಿಶ್ಚಲ ಸಮಸ್ಥಿತಿ(Static equilibrium) ಸಾರುವ ‘ಶೂನ್ಯ’ ಹುಟ್ಟು ಸಾವಿನ ಪರಿಮಿತಿಯಲ್ಲಿ ಅನಿವಾರ್ಯ ಎಂದು ಮನದಟ್ಟು ಮಾಡಿಸುತ್ತದೆ. ಹಾಗೆಯೇ, ಬಾಳಹೋರಾಟದ ಒಂದೊಂದು ಹೆಜ್ಜೆಯಲ್ಲೂ ಏರುಪೇರಿನ ಸಮಸ್ಥಿತಿ(ಆಥಿಟಿಚಿmiಛಿ equiಟibಡಿium) ಸಾರುವ’ಶೂನ್ಯ’ ಅಂದರೆ ಸ್ಥಿತಪ್ರಜ್ಞತೆ ಹೆಚ್ಚು ಅಗತ್ಯ ಎಂದು ಭಗವದ್ಗೀತೆಯ ಈ ಕೆಳಗಿನ ಸಂದೇಶಗಳು ಸಾರುತ್ತವೆ: ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸು; ಲಾಭ-ನಷ್ಟ, ಜಯ-ಅಪಜಯಗಳಿಂದ ವಿಚಲಿತನಾಗದಿರು; ಕರ್ಮ ಒಂದೇ ನಿನ್ನ ಅಧಿಕಾರ, ಫಲಾಫಲಗಳ ಚಿಂತೆಯಲ್ಲಿ ಕಾಲಹರಣಮಾಡದೆ ಎಲ್ಲರ ಒಳಿತಿಗಾಗಿ ಕಾಯಕದಲ್ಲಿ ತೊಡಗು. ಈ ಎರಡೂ ಬಗೆಯ ಸಮಸ್ಥಿತಿಗಳನ್ನು ಸಾರುವ ‘ಶೂನ್ಯ’ ಗಣಿತಕ್ಕಿಂತ ನಮ್ಮ ಬಾಳ ಒಳಿತಿಗೆ ಹೆಚ್ಚು ಉಪಯುಕ್ತವಾದುದು ಎಂಬುದು ಒಂದು ಉನ್ನತ ಅಭಿಪ್ರಾಯ. ಹಾಗಾಗಿ, ಈ ಒಂದು ದೃಷ್ಟಿಕೋನವಿಟ್ಟು, ಶೂನ್ಯದ ಜನಕಸ್ಥಾನ ನಮ್ಮ ಭಾರತೀಯ ದಾರ್ಶನಿಕರೆಲ್ಲರಿಗೂ ಸಲ್ಲಿದ್ದಾರೆ ಹಲವು ಇತಿಹಾಸಕಾರರು.