10. ಆರೋಗ್ಯಕ್ಕೆ ಸಿರಿ ನೀಡುವ ಆಹಾರ ಸೊಪ್ಪು
ಡಾ|| ಜಿ. ಸರಸ್ವತಿ,ಪ್ರೊಫೆಸರ್, (ನಿವೃತ್ತ), ಆಹಾರ ವಿಜ್ಞಾನ ಮತ್ತು ಪೋಷಣಾ ವಿಭಾಗ ಮಾನಸ ಗಂಗೋತ್ರಿ, ಮೈಸೂರು

ಪ್ರತಿ ಅಕ್ಟೋಬರ್ 16ನೇ ದಿನವನ್ನು ವಿಶ್ವ ಆಹಾರ ದಿನವೆಂದು FAO ನವರು ಆಚರಿಸುತ್ತಾರೆ. ನಮ್ಮ ದೇಶದಲ್ಲೂ ಇದನ್ನು ಆಚರಿಸಿ, ನಮ್ಮ ಆಹಾರದ ಉತ್ಪಾದನೆ ಮತ್ತು ಸೇವನೆಯ ಅವಲೋಖನ ಮಾಡಿ ಹೇಗಿದೆ ಎಂದು ಕಲಿಯಬಹುದು.

ನಮ್ಮ ಆರೋಗ್ಯಕ್ಕೆ ಆಹಾರವೇ ಮೂಲ. ನಮಗೆಲ್ಲಾ ತಿಳಿದಂತೆ, ನಾವು ಆರೋಗ್ಯವಾಗಿರುವುದಕ್ಕೆ ಧಾನ್ಯ, ಬೇಳೆಕಾಳು ಹಾಲು, ಮೊಸರು, ಹಸಿರು ಸೊಪ್ಪು, ತರಕಾರಿಗಳು ಇತ್ಯಾದಿಗಳಿರುವ ಸಮತೋಲನ ಆಹಾರವನ್ನು ಸೇವಿಸಬೇಕು. ಹಾಗಾದರೆ ಎಲ್ಲಾ ಭಾರತೀಯರಿಗೆ ಆರೋಗ್ಯಕ್ಕೆ ಬೇಕಾದ ಆಹಾರಗಳನ್ನು ಸೇವಿಸುತ್ತಿದ್ದಾರೆಯೇ ?

ನಮ್ಮ ದೇಶದಲ್ಲಿ ನಡೆದ ಸಮೀಕ್ಷೆಗಳಿಂದ ತಿಳಿದು ಬಂದಿರುವುದೇನೆಂದರೆ; ರಕ್ಷಕ ಆಹಾರಗಳಾದ ಸೊಪ್ಪು, ತರಕಾರಿ, ಹಾಲಿನ ಸೇವನೆ, ಬೇಕಾದಷ್ಟು ಪ್ರಮಾಣದಲ್ಲಿ ಇಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳಾಗಿವೆ. ಪ್ರಮುಖವಾಗಿ ಹೆಂಗಸರು, ಮಕ್ಕಳಲ್ಲಿ ರಕ್ತಹೀನತೆ, (ಕಬ್ಬಿಣಾಂಶದ ಕೊರತೆ), ಬೆಳೆಯಬೇಕಾದಷ್ಟು ಬೆಳೆಯದಿರುವುದು (ಪ್ರೋಟೀನು ಮತ್ತು ಶಕ್ತಿಯ ನ್ಯೂನತೆ) ಕಣ್ಣಿನ ಅನಾರೋಗ್ಯ, ರೋಗನೀರೋಧಕ ಶಕ್ತಿಯ ಕೊರತೆ (ಎ ಜೀವಸತ್ವದ ಕೊರತೆ)-ಇವುಗಳನ್ನು ಕಾಣುತ್ತಿದ್ದೇವೆ. ಇಲ್ಲಿ ಸೊಪ್ಪಿನ ಸೇವನೆಯಿಂದ ಆರೊಗ್ಯಕ್ಕಾಗುವ ಲಾಭಗಳೇನು ? ಅವುಗಳನ್ನು ಎಷ್ಟು ಸೇವಿಸಬೇಕು ? ಎಂಬ ವಿಷಯ ತಿಳಿಸಿದೆ.

ಸೊಪ್ಪುಗಳನ್ನು ತರಕಾರಿಗೆ ಹೋಲಿಸಿದರೆ, ಕಡಿಮೆ ಖರ್ಚಿನಲ್ಲಿ ಹೆಚ್ಚು ಪೋಷಕಾಂಶಗಳು ದೊರೆಯುತ್ತವೆ. ಸ್ಥಳೀಯವಾಗಿ ಅನೇಕ ಹಸಿರು ಸೊಪ್ಪುಗಳು ನಮ್ಮಲ್ಲಿ ಸಿಗುತ್ತವೆ. ಮೈಸೂರಿನ ನಂಜುಮಳಿಗೆಯ ಮಾರುಕಟ್ಟೆಯಲ್ಲಿ 15-20 ರೀತಿಯ ಇತರ ಸ್ಥಳದಲ್ಲಿ 4-5 ರೀತಿಯ ಸೊಪ್ಪುಗಳು ಸಿಗುತ್ತದೆ ಉದಾಹರಣೆಗೆ ನುಗ್ಗೆ, ಎಳವಾರೆ, ಪಾಲಕ್, ಅಗಸೆ, ದಂಟು, ಸಬ್ಸಿಗೆ, ವಂದೆಲಗ (ಬ್ರಾಹ್ಮಿ), ಮೂಲಂಗಿ, ಕೊತ್ತಂಬರಿ, ಪುದಿನ, ಕರಿಬೇವು, ಚಕ್ರಮುನಿ, ಅಣ್ಣೆ ಸೊಪ್ಪು, ವಾಯುನಾರಾಯಣಿ, ಬಸಳೆ, ಹೊನಗುನೆ, ಗುರ್‍ಚಿ ಇತ್ಯಾದಿ ಸೊಪ್ಪುಗಳು ಸಿಗುತ್ತವೆ. ಈ ಸೊಪ್ಪುಗಳಿಂದ ರಕ್ತದ ಆರೋಗ್ಯಕ್ಕೆ ಬೇಕಾದ ಕಬ್ಬಿಣಾಂಶ, ಕಣ್ಣಿನ ಆರೋಗ್ಯಕ್ಕೆ ಬೇಕಾದ ‘ಎ’ ಜೀವಸತ್ವವಾಗುವ ಕ್ಯಾರೋಟೀನ್, ಮೂಳೆಯ ಬೆಳವಣಿಗೆಗೆ ಅಗತ್ಯವಾದ ಕ್ಯಾಲ್ಸಿಯಂ ಸಾಕಷ್ಟು ಸಿಗುತ್ತವೆ. ನಾವು ಬಳಸುವ ಚಟ್ನಿ, ಕೋಸಂಬರಿಯಲ್ಲಿ ಬಳಸುವ ಹಸಿ ರೂಪದÀÀ ಸೊಪ್ಪುಗಳಾದ ಕೊತ್ತಂಬರಿ, ಪುದಿನಾಗಳಿಂದ ಮತ್ತು ಹಸಿಮೆಣಸಿನಕಾಯಿಗಳಿಂದ ಸಿ- ಜೀವಸತ್ವ. ದೊರೆಯುತ್ತದೆ. ಬೇಯಿಸಿದಾಗ ಸಿ ಜೀವಸತ್ವವು ನಾಶವಾಗುತ್ತದೆ. ಸಿ ಜೀವಸತ್ವವು ಕಬ್ಬಿಣಾಂಶ ಹೀರುವಿಕೆಗೆ ಅವಶ್ಯಕ. ಸೊಪ್ಪಿನಿಂದ ಹೆಚ್ಚು ನಾರಿನಾಂಶ ಲಭಿಸಿ ಮಲವಿಸರ್ಜನೆಗೆ ಸಹಾಯಕ. ಇದಲ್ಲದೆ ಹೆಚ್ಚು ಪ್ರಮಾಣದಲ್ಲಿ ಸಸ್ಯ ರಾಸಾಯನಿಕಾಂಶಗಳು (Phytochemicals/ antioxidants)ಲಭಿಸಿ, ದೇಹದಲ್ಲಿ ತಯಾರಾಗುವ ಕೆಲವು ವಿಷದ ವಸ್ತುಗಳನ್ನು ವಿಷವಲ್ಲದ ವಸ್ತುಗಳಾಗಿ ಮಾಡಿ ಆರೋಗ್ಯ ರಕ್ಷಕಾಂಶಗಳಾಗಿ ಕೆಲಸ ಮಾಡುತ್ತವೆ .

ಅಡಿಗೆ ಮಾಡುವಾಗ ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಸೇವಿಸಬೇಕು, ಇಲ್ಲದಿದ್ದರೆ ಸೋಂಕು ರೋಗ ಮತ್ತು ಹೊಟ್ಟೆಯಲ್ಲಿ ಜಂತುಹುಳು ಕೂಡ ಬರಬಹುದು. ಸೊಪ್ಪನ್ನು ಕತ್ತರಿಸುವಾಗ ತೊಳೆದು ಅನಂತರ ಕತ್ತರಿಸಿದರೆ ಒಳ್ಳೆಯದು. ಆಹಾರ ತಯಾರಿಕೆಯಲ್ಲಿ ಸೊಪ್ಪನ್ನು ( ಚಪಾತಿ, ರೊಟ್ಟಿ, ಇಡ್ಲಿ ಹೀಗೆ) ಹಾಕಿ ತಯಾರಿಸುವುದರಿಂದ ಸೊಪ್ಪಿನ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆ. ಅನೇಕರು ಸೊಪ್ಪನ್ನು ಇಷ್ಟವಿಲ್ಲವೆಂದು ಸೇವಿಸುವುದಿಲ್ಲ. ಆದರೆ ಇದು ಸರಿಯಾದ ಅಭ್ಯಾಸವಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ಪ್ರತಿದಿನ ಒಂದು ಬಟ್ಟಲು /ಒಂದು ಕಂತೆ ಸೊಪ್ಪನ್ನು ಒಬ್ಬರು ಸೇವಿಸಿದರೆ ಸಾಕು. ಮಕ್ಕಳಲ್ಲಿರುವ ರಕ್ತಹೀನತೆಯಿಂದಾಗುವ ಸಮಸ್ಯೆಗಳು ( ಓದಿನಲ್ಲಿ ಆಟದಲ್ಲಿ ನಿರಾಸಕ್ತಿ, ಕಡಿಮೆ ರೋಗನಿರೋಧಕ ಶಕ್ತಿ) ನಿಧಾನವಾಗಿ ತೊಂದರೆಗಳನ್ನು ಕೊಡುವುದರಿಂದ ಇದರ ಬಗ್ಗೆ ಯಾರೂ ಕಾಳಜಿಯನ್ನು ಮಾಡುವುದಿಲ್ಲ. ಆದರೆ ಇದನ್ನು ಸುಲಭವಾಗಿ ಸೊಪ್ಪುಗಳ ಸೇವನೆಯಿಂದ ಖಂಡಿತವಾಗಿ ದೂರವಿಡಬಹುದು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಆದ್ದರಿಂದ ತೋಟಗಾರಿಕೆ ವಿಭಾಗದ ಸಹಾಯದಿಂದ ಶಾಲೆಯಲ್ಲಿ ಅನುಕೂಲವಿರುವವರು, ಮನೆಯಲ್ಲಿ ಜಾಗವಿರುವವರು ಸೊಪ್ಪನ್ನು ಬೆಳೆಸಿ, ತಾಜಾ ಸೊಪ್ಪನ್ನು ಸೇವಿಸಿ ಆರೋಗ್ಯದ ಸಿರಿಯನ್ನು ಅನುಭವಿಸಿ.