26. ಕಳ್ಳಿಯಲ್ಲಿ ಹಾಲು ಹೇಗೆ ಬರುತ್ತದೆ? ಈ ರೀತಿ ಯಾವ ಯಾವ ಗಿಡಗಳಲ್ಲಿ ಹಾಲು ಬರುತ್ತದೆ?
ಅಖಿಲೇಶ್ ಭಟ್, ನಾಗಭೂಷಣ್, ಶ್ರೀಶಾ.ಡಿ.ಎಲ್. ರವೀಶಾ.ಕೆ.ಎ. DOS ಸಸ್ಯಶಾಸ್ತ್ರ, ಎಂಜಿಎಂ

ಕಳ್ಳಿ ಗಿಡಕ್ಕೆ ಹಾನಿಯಾಗಿ ಗಾಯವಾದರೆ ಗಾಯಗೊಂಡ ಜೀವಕೋಶಗಳು ಬಿಳಿಯ ಬಣ್ಣದ ದ್ರವವನ್ನು ಹೊರಸೂಸುತ್ತವೆ, ಇದನ್ನೇ ಕಳ್ಳಿಯ ಹಾಲು ಎನ್ನುತ್ತಾರೆ. ಕೆಲವು ಗಿಡಗಳು ವರ್ಣರಹಿತ ದ್ರವವನ್ನೂ ಹೊರಸೂಸುವುದುಂಟು, ಉದಾಹರಣೆಗೆ ಮಾವು.

ಹಾಲನ್ನು ಹೊರಸೂಸುವ ಗುಣ ಕೇವಲ ಕಳ್ಳಿ ಗಿಡಕ್ಕೆ ಮಾತ್ರ ಸೀಮಿತವಾಗಿಲ್ಲ. ಸುಮಾರು 40 ಸಸ್ಯ ಕುಟುಂಬಗಳಿಗೆ ಸೇರಿದ 20000 ಸಸ್ಯ ಪ್ರಭೇದಗಳು ಹಾಲನ್ನು ಹೊರಸೂಸುವ ಗುಣ ಹೊಂದಿವೆ. ಇವುಗಳಲ್ಲಿ ಅಪೋಸಿನೆಸಿಯೇ (Apocyanaceae), ಆಸ್ಕ್ಲಿಪಿಯಡೆಸಿಯೇ (Asclepiadaceae), ಯುಫೆÇೀರ್ಬಿಯೆಸಿಯೇ (Euphorbiaceae), ಮೋರೇಸಿಯೇ (Moraceae), ಆಸ್ಟಿರೆಸಿಯೇ (Asteraceae), ಸಪೊಟಾಸಿಯೇ (Sapotaceae), ಮುಂತಾದ ಕುಟುಂಬಗಳಿಗೆ ಸೇರಿದ ಸಪೊಟಾ, ಹಲಸು, ಎಕ್ಕ, ಪರಂಗಿ, ಅರಳಿ, ಆಲ ಮತ್ತು ರಬ್ಬರ್ ಮರಗಳು ಪ್ರಮುಖವಾದವು.

ಗಿಡಗಳಲ್ಲಿ ಹಾಲು ಬರುವುದು ಲ್ಯಾಟಿಸಿಫೆರಸ್ (Laticiferous) ಸಸ್ಯಗಳ ಪ್ರಮುಖ ಗುಣ. ಈ ಸಸ್ಯಗಳಲ್ಲಿರುವ ಲ್ಯಾಟಿಸಿಫೆರಸ್ ಜೀವಕೋಶಗಳು ಈ ಹಾಲಿನಂತಹ ದ್ರವವನ್ನು ಉತ್ಪಾದಿಸುತ್ತವೆ. ವೈಜ್ಞಾನಿಕ ಭಾಷೆಯಲ್ಲಿ ಈ ದ್ರವವನ್ನು ಲೇಟೆಕ್ಸ್ (Latex), ಎನ್ನುತ್ತಾರೆ. ಸಸ್ಯಗಳು ಉತ್ಪಾದಿಸುವ ರೆಸಿನ್, ಲೋಳೆ, ಅಂಟುಗಳಿಗಿಂತ ಈ ಲೇಟೆಕ್ಸ್ ಭಿನ್ನವಾಗಿರುತ್ತದೆ. ಪೆÇ್ರೀಟಿನುಗಳು (Protein), ಪಾಲಿಸ್ಯಕರೈಡುಗಳು (Polysaccharides), ಹಾಗು ಇತರ ರಾಸಾಯನಿಕ ಮಿಶ್ರಣಗಳನ್ನು (Organic and Inorganic compounds) ಲೇಟೆಕ್ಸ್ ಒಳಗೊಂಡಿದೆ.

ಸಸ್ಯಗಳಲ್ಲಿ ಲೇಟೆಕ್ಸ್ ಆಹಾರ ಶೇಕರಣೆ, ನೀರಿನ ಸಮತೋಲನ, ಸಸ್ಯದ ಬೆಳವಣಿಗೆ, ನೀರು ಮತ್ತು ಆಹಾರದ ಶೇಕರಣೆ ಮತ್ತು ಸಾಗಾಣಿಕೆ ಹಾಗು ಸಸ್ಯಾಹಾರಿ ಪ್ರಾಣಿಗಳಿಂದ ರಕ್ಷಣೆಯಂತಹ ಕಾರ್ಯವನ್ನು ನಿರ್ವಹಿಸುತ್ತಿದ್ದರೂ ಸಸ್ಯಗಳಲ್ಲಿ ಲೇಟೆಕ್ಸ್ ನ ಪ್ರಥಮ ಮುಖ್ಯ ಕಾರ್ಯವೇನು ಎಂಬುದರ ಬಗ್ಗೆ ನಿಖರ ಮಾಹಿತಿಗಾಗಿ ಇನ್ನೂ ಸಂಶೋಧನೆಗಳು ನಡೆಯಬೇಕಿವೆ.